ರೇಖಾಳಿಗೆ ಸಡಗರವೋ ಸಡಗರ. ಅವಳ ಅಲಾರಾಂ ಕೂಗುವ ಮೊದಲೇ ಎದ್ದು ಖುಷಿಯಿಂದ ಓಡಾಡುತ್ತಿದ್ದಳು. ಬೆಳಗಿನ ತಿಂಡಿಗೆ ಅವಳ ಅಮ್ಮನಿಗೆ ಇಷ್ಟವಾದ ಒತ್ತು ಶ್ಯಾವಿಗೆ ಮಾಡುವುದೆಂದು ನಿರ್ಧರಿಸಿದ್ದಳು. ಹೌದು, ರೇಖಾಳ ತವರು ಮನೆಯವರು ಅವಳ ಮನೆಗೆ ಬರುವವರಿದ್ದರು. ಈಗ ನಿಮಗೆ ಅರ್ಥವಾಗಿರಬೇಕು ಅವಳ ಖುಷಿಯ ಕಾರಣ. ಗೌರಿ ಗಣೇಶ ಹಬ್ಬಕ್ಕೆ ಇನ್ನೇನು 15 ದಿನವಷ್ಟೇ ಉಳಿದಿತ್ತು.

ಒಂದು ವಾರದ ಹಿಂದೆ ರೇಖಾಳ ಅಮ್ಮ phone ಮಾಡಿ, ರೇಖಾ ನಾವು ನಿಮ್ಮ ಮನೆಗೆ ಬರುತ್ತಾ ಇದ್ದಿವಿ, ಗೌರಿ ಹಬ್ಬಕ್ಕೆ ಅರಿಶಿನ ಕುಂಕುಮ ಕೊಡೋದಿದೆ ಎಂದಿದ್ದರು. ಫೋನ್ ಇಟ್ಟ ಗಳಿಗೆಯಿಂದಲೇ ಮನೆಯನ್ನು ಅಂದ ಮಾಡಲು ಶುರು ಮಾಡಿದ್ದಳು. ಇದು ಸಾಧಾರಣ ಎಲ್ಲ ಮಲೆನಾಡಿನಲ್ಲಿ ಗೌರಿ ಹಬ್ಬ ಆಚರಿಸುವ ಮನೆಗಳಲ್ಲಿ ನಡೆಯುವ ದೃಶ್ಯ.
ಚೌತಿಯ ಹಿಂದಿನ ದಿನ, ಸ್ವರ್ಣ ಗೌರಿ ವೃತವನ್ನು ಮದುವೆಯಾದ ಹೆಣ್ಣು ಮಕ್ಕಳು ಆಚರಿಸುತ್ತಾರೆ. ಹಬ್ಬದ ಮೊದಲು ತವರು ಮನೆಯಿಂದ ಅರಿಶಿನ ಕುಂಕುಮವನ್ನು ಖುದ್ದಾಗಿ ಇಲ್ಲವೇ ಪೋಸ್ಟ್ನಲ್ಲಿಯಾದರು ಕಳಿಸುತ್ತಾರೆ.
ಅರಿಶಿನ ಕುಂಕುಮದೊಟ್ಟಿಗೆ ತೆಂಗಿನ ಕಾಯಿ, ಹಣ್ಣು, ಸೀರೆ ಕುಪ್ಪಸ, ಗೌರಿ ಬಾಗಿನ(ಬಳೆ, ಬಾಚಣಿಗೆ, ಅರಿಶಿನ ಕುಂಕುಮ ಪೆಟ್ಟಿಗೆ, ಪುಟ್ಟ ಕನ್ನಡಿ), ವೀಳ್ಯದೆಲೆ ಅಡಿಕೆ, ಹತ್ತಿಯಿಂದ ಮಾಡಿದ ವಸ್ತ್ರಾಭರಣಗಳನ್ನು ಕೊಡುತ್ತಾರೆ.

ಹತ್ತಿಯ ವಸ್ತ್ರಾಭರಣ ಎಂದಾಗ ನಾನು ನನ್ನ ಅಜ್ಜಿಯ ಬಗ್ಗೆ ಮಾತನಾಡಲೇಬೇಕು. ನನ್ನ ಅಜ್ಜಿಗೆ ಈ ಹತ್ತಿಯ ಎಳೆಯನ್ನು ಮಾಡಲು ಗಿಡದ ಹತ್ತಿಯೇ ಆಗಬೇಕು. ಅದಕ್ಕೆಂದೇ ಅವರು ಹಿತ್ತಲಿನ್ನಲ್ಲಿ ಎರಡು ಹತ್ತಿಯ ಮರವನ್ನು ಬೆಳೆಸಿಕೊಂಡಿದ್ದಾರೆ. ಸುಮಾರು January ತಿಂಗಳಿನಿಂದ ಅವರು ಹತ್ತಿಯನ್ನು ಆರಿಸಲು ಶುರು ಮಾಡುತ್ತಾರೆ. ಹತ್ತಿಯನ್ನು ಅದರ ಪುಷ್ಪದಿಂದ ಬಿಡಿಸಿ, ಬೀಜವನ್ನು ಹೆಕ್ಕಿ ಬಿಡಿ ಹತ್ತಿಯನ್ನು ಬಿಡಿಸುತ್ತಾರೆ. ಮತ್ತೆ ಅದನ್ನು ಬಿಸಿಲಿಗೆ ಇಟ್ಟು ಡಬ್ಬಿಯಲ್ಲಿ ತುಂಬಿಸಿಡುತ್ತಾರೆ. ಇದು ಮಳೆ ಹಿಡಿಯುವ ತನಕ ನಡೆಯುತ್ತದೆ. ಅಷ್ಟರಲ್ಲಿ ಮನೆಯ ಎಲ್ಲರಿಗೂ ಹತ್ತಿಯ ವಸ್ತ್ರಾಭರಣವನ್ನು ಮಾಡುವಷ್ಟು ಹತ್ತಿ ಆಗಿರುತ್ತದೆ.
ಇನ್ನು ಮಳೆಗಾಲ ಶುರುವಾಗುತ್ತಿದ್ದಂತೆ ಅಜ್ಜಿ ಹತ್ತಿಯನ್ನು ತೆಗೆದು ದಪ್ಪ ನೂಲಿನಂತೆ ಹೆಣೆಯಲು ಶುರು ಮಾಡುತ್ತಾರೆ. ಇದಕ್ಕೆ ಅವರು ಒಂದು ಮಣೆಯ ಮೇಲೆ ಬಟ್ಟೆಯನ್ನು ಹಾಕಿ ಹತ್ತಿಯನ್ನು ಎಳೆದು ನೂಲಿನಂತೆ ಎಳೆ ಎಳೆಯಾಗಿ ಉದ್ದ ಹೆಣೆಯುತ್ತಾ ಹೋಗುತ್ತಾರೆ. ಈ ಹೆಣೆದ ಎಳೆಯನ್ನು ಇನ್ನು ಹೇಗೆ ಬೇಕಾದರೂ ಡಿಸೈನ್ ಮಾಡಬಹುದು. ಡಿಸೈನ್ ಮಾಡಿ ಬಣ್ಣ ಬಣ್ಣದ ಸಂತದ ತಗಡು, ಟ್ವಿಕ್ಲಿ ಅಂಟಿಸಿ ಅಂದ ಮಾಡುತ್ತಾರೆ. ಅಜ್ಜಿ ನಾನಾ ತರದ ಹತ್ತಿಯ ಎಳೆಗಳನ್ನು, ಮಾಲೆಗಳನ್ನು ಮಾಡುವುದನ್ನು ನೋಡುವುದೇ ಒಂದು ಸೊಬಗು!

ಪ್ರತಿ ವರ್ಷ ರೇಖಾಳಂತೆ ಎಲ್ಲ ಹೆಣ್ಣು ಮಕ್ಕಳು ಖುಷಿಯಿಂದ ಕಾಯುವ ಹಬ್ಬ ಇದಾಗಿದೆ. ಸ್ವರ್ಣ ಗೌರಿ ವ್ರತವನ್ನು ಮನೆಯವರೆಲ್ಲ ಸೇರಿ ಮಾಡುವುದೇ ಒಂದು ಸಂಭ್ರಮ! ಎಲ್ಲರಂತೆ ನಾನು ಕೂಡ ಈ ವ್ರತವನ್ನು ಮಾಡಲು ಕಾತುರದಿಂದ ಕಾಯುತ್ತಿದ್ದೇನೆ.
ಕೊನೆಯದಾಗಿ ನಿಮಗೆಲ್ಲರಿಗೂ ಸ್ವರ್ಣ ಗೌರಿ ಹಾಗೂ ಗಣಪತಿ ಹಬ್ಬದ ಶುಭಾಶಯಗಳು!

Happy reading!
(The red and yellow flower in the post is called as Gowri Hoovu.)