
ನೀಲಿ ಕುರುಂಜಿ
ಹಸಿರು ಹಿತ್ತಲ ಗುಡ್ಡದಲ್ಲಿ
ನೀಲಿ ಗೊಂಡೆಯ ಹೂಗಳು ತುಂಬಿ ತುಳುಕಿದೆ
ಪ್ರತಿ ಮಳೆಗಾಲದಲ್ಲೂ ಗುಡ್ಡ ತುಂಬುವ
ನೇರಳೆಯ ಶಂಕ ಪುಷ್ಪ ದಂತಿರಬೇಕು ಇದು ಕೂಡ
ಎಂದು ಮನಸ್ಸು ಗಮನ ಕೊಡದೆ ಆನಂದಿಸಿದೆ
ನೋಡಲೆಂತು ಅಂದವಾಗಿದೆ, ವರ್ಷವೂ ಬಿಡುತ್ತದಾ?
12 ವರ್ಷಕ್ಕೊಮ್ಮೆ ಮಾತ್ರ ಅರಳುತ್ತದಾ ಎಂದು
ಯೋಚಿಸಲಾಗದ ವಯಸ್ಸು
ನೀಲಿಯ ಹೂವನ್ನು ಕೊಯ್ದು ತಂದು
ದೇವರಾಟ ಆಡಿದ್ದೂ ಆಯಿತು!
ಮತ್ತೆಷ್ಟೋ ವರ್ಷದ ನಂತರ ತಿಳಿದದ್ದು
ನಾವು ಎಳವೆಯಲ್ಲಿ ನೋಡಿ ಆಡಿದ ಪುಷ್ಪಗಳು
ನೀಲಿ ಕುರುಂಜಿ ಎಂದು!!
ಕಾಫಿ ಹಣ್ಣುಗಳು
ಹಿತ್ತಲ ಧರೆಯ ತುಂಬಾ ಕಾಫಿಗಿಡಗಳು
ಕೆಂಪನೆಯ ಹಣ್ಣಿನಿಂದ ತುಂಬಿದ್ದವು.
ಕಾಫಿ ಹಣ್ಣಿನ ಪರಿಮಳ ಮಾರು ದೂರದವರೆಗೂ ಬಡಿಯುತ್ತಿತ್ತು.
ಇವತ್ತಲ್ಲ ನಾಳೆ ಬಿಡುಗಡೆಯಾಗುತ್ತೇವೆ ಎಂದು
ಕಾಫಿಗಿಡಗಳು ಬೇಸಾಯವಿಲ್ಲದೆ ಮರಗಳಾಗಿದ್ದವು
ಅಯ್ಯೋ ಕಾಫಿ ಹಣ್ಣು ಹಾಳಾಗುತ್ತದೆಂದು
ಅಜ್ಜಿ ತಲೆಗೆ ಬುಟ್ಟಿಯ ಕೊಟ್ಟು ಸಿಕ್ಕಿಸಿ,
ಉದ್ದನೆಯ ದೋಟಿ ಹಿಡಿದು, ಸೀರೆಯನ್ನು ಎತ್ತಿಕಟ್ಟಿ
ಕಾಡಿಗಿಳಿದಿದ್ದಳು.
ಕೈಗೆ ಸಿಕ್ಕ ಕೆಂಪು ಹಣ್ಣುಗಳನ್ನೆಲ್ಲಾ ಕೊಯ್ದು ಬುಟ್ಟಿಗೆ ತುಂಬಿಸಿ,
ಮೈಯೆಲ್ಲಾ ಉಣುಗು, ಕೆಂಪು ಇರುವೆ ಮೆತ್ತಿಸಿಕೊಂಡು,
ಬೆಂದ ಟೊಮ್ಯಾಟೋ ನಂತೆ ತಿರುಗಿ,
ಮಕ್ಕಳಾ ಶಾಲೆ ಮುಗಿತಾ ಎಂದು ಓಡುತ್ತಾ ಬರುತ್ತಿದ್ದಳು!