ಆ ದಿನಗಳ ದೀಪಾವಳಿಯ ನೆನಪುಗಳು

ದೀಪಾವಳಿ ದೀಪಗಳ ಹಬ್ಬ. ಎಲ್ಲೆಲ್ಲೂ ಬೆಳಕು ಹಾಗೂ ಪಟಾಕಿಗಳ ಸದ್ದು. ನಾನು ಮತ್ತು ನನ್ನ ತಂಗಿ ಕಾದಿರುವ ಹಬ್ಬ. ಯಾಕೆಂದರೆ ಒಂದೇ ಹಬ್ಬದಲ್ಲಿ ನಾಲ್ಕಾರು ಬಗೆಯ ಸಂಭ್ರಮಾಚರಣೆಗಳು. ಮೊದಲನೆಯ ದಿನದ ಎಣ್ಣೆ ಅಭ್ಯಂಜನದಿಂದ ಶುರುವಾಗುವ ಹಬ್ಬ ಗೋ ಪೂಜೆ, ಅಂಗಡಿ ಪೂಜೆ, ಲಕ್ಷ್ಮಿ ಪೂಜೆಯೊಂದಿಗೆ ಮುಗಿಯುತ್ತಿತ್ತು.

ಎಣ್ಣೆ ಸ್ನಾನದ ಹಿಂದಿನ ದಿನ, ಸ್ನಾನದ ಮನೆಯನ್ನು ಶುಚಿಗೊಳಿಸಿ ಹಂಡೆಯ ಸುತ್ತ ಸುಣ್ಣದ ಅಲಂಕಾರ ಹಾಗು ಹಿಂಡಲು ಗಿಡದ ಬಳ್ಳಿಯನ್ನು ಸುತ್ತುತ್ತಿದ್ದೆವು. ಹಬ್ಬದ ದಿನ ಬೆಳಗ್ಗೆ ಬೇಗ ಎದ್ದು ಮೊದಲು ಬಚ್ಚಲಿಗೆ ಬೆಂಕಿ ಹಾಕುತ್ತಿದ್ದೆವು. ನೀರು ಕಾದ ಮೇಲೆ ಮೊದಲು ಗುಂಡಪ್ಪನಿಗೆ (ಅಗ್ನಿ) ಎಣ್ಣೆ ಸ್ನಾನ ಮತ್ತು ಪೂಜೆ. ನಂತರ ಮನೆಯವರೆಲ್ಲ ಎಣ್ಣೆ ಅಭ್ಯಂಜನ ಮಾಡಿ ಅಗ್ನಿ ದೇವರಿಗೆ ನಮಸ್ಕಾರ ಮಾಡಿದ ಮೇಲೆ ಚೀನಿಕಾಯಿ ಕಡುಬನ್ನು ಸವಿಯುತ್ತಿದ್ದೆವು.

ಗೋ ಪೂಜೆಯ ತಯಾರಿ ಹಿಂದಿನ ದಿನದಿಂದಲೇ ಶುರು. ದನದ ಕೊಟ್ಟಿಗೆಯನ್ನು ತಿಕ್ಕಿ ತಿಕ್ಕಿ ತೊಳೆಯುತ್ತಿದ್ದೆವು. ಅಲ್ಲೇ ಕೂತು ಊಟ ಮಾಡುವ ಹಾಗೆ. ನಂತರ ಅಲ್ಲಿರುವ ಕಂಬಗಳಿಗೆಲ್ಲ ಕುಂಕುಮ ಮತ್ತು ಸುಣ್ಣದಿಂದ ಪಟ್ಟೆಯಲಂಕಾರ. ಹಾಗೂ ಮನೆಯಲ್ಲಿರುವ ಅಷ್ಟೂ ದನ ಕರುಗಳಿಗೆ ಕೈಯಾರೆ ಹೂವು ಆಯ್ದು ಅವುಗಳ ಕೊರಳಿಗೆ ಅಮ್ಮ ಹಾಗೂ ಅಜ್ಜಿ ಹೂಮಾಲೆ ಕಟ್ಟುತ್ತಿದ್ದರು.
ಗೋ ಪೂಜೆಯ ದಿನ ಮುಂಜಾನೆಯೇ ಎದ್ದು ಮೊದಲು ಮಾಡುತ್ತಿದ್ದ ಕೆಲಸ ಬಚ್ಚಲಿಗೆ ಬೆಂಕಿ ಹಾಕುವುದು. ಯಾಕೆಂದರೆ ಪುಟ್ಟಿ, ಚಿತ್ತಾರಿ ಇವರೆಲ್ಲರಿಗೂ ಬಿಸಿ ಬಿಸಿ ನೀರಿನ ಎಣ್ಣೆ ಸ್ನಾನ ಆಗಬೇಕು. ಮಾರುಕಟ್ಟೆಯಲ್ಲಿ ಯಾವ ಹೊಸ ಸೋಪ್ ಇದ್ಯೋ ಅದರಲ್ಲೇ ಮೈ ತಿಕ್ಕಿ ತಿಕ್ಕಿ ಅವುಗಳಿಗೆ ಸ್ನಾನ ಮಾಡಿಸುವ ಕೆಲ್ಸಸ ಅಪ್ಪ ಅಮ್ಮನದು. ನಂತರ ಅವುಗಳಿಗೆ ಎಲ್ಲರೂ ಸೇರಿ ಅವುಗಳ ಮುಖ ಹಾಗೂ ಮಯ್ಯ ಮೇಲೆ ಕುಂಕುಮ ಅಂಡ್ ಸುಣ್ಣದ ಹಂಡೆ ಹಾಕುತ್ತಿದ್ದೆವು.(ಕುಂಕುಮ ಸುಣ್ಣದ ನೀರಿಗೆ ಲೋಟ ಮುಳುಗಿಸಿ ಅವ್ಳುಗಳ ಮೈಗೆ ಬಣ್ಣ ಅಂಟುವ ಹಾಗೆ ಬಡಿಯುತ್ತಿದೆವು).
ಅಷ್ಟರಲ್ಲಿ ಅಡುಗೆ ಮನೆಯಲ್ಲಿ ಅವುಗಳಿಗೆ ಬಿಸಿ ಬಿಸಿಯಾದ ಇಡ್ಲಿ ತಯಾರಾಗಿರುತ್ತಿತ್ತು. ನಂತರ ಅಪ್ಪನಿಂದ ಗೂವುಗಳಿಗೆ ಪೂಜೆ. ಎಲ್ಲಾ ಗೂವುಗಳಿಗೂ ಕಟ್ಟಿರುವ ಮಾಲೆಯನ್ನ ಕೊರಳಿಗೆ ಹಾಕಿ ಆರತಿ ಮಾಡುತ್ತಿದೆವು. ತಿನ್ನಲ್ಲಿಕ್ಕೆ ಬಿಸಿ ಬಿಸಿ ಇಡ್ಲಿ, ನೆನೆಸಿದ ಅಕ್ಕಿ ಹಾಗೂ ಬೇಳೆ, ಹಿನ್ಡಿ ಕಲಗಚ್ಚನ್ನು ಕೊಡುತ್ತಿದ್ದೆವು.

ಎಲ್ಲವೂ ಸಿಂಗಾರ ಮಾಡಿಸಿಕೊನ್ದು ಮುದ್ದಾಗಿ ಕಾಣುತ್ತಿದ್ದವು. ಮೇಯಲು ಹೋಗುತ್ತಿದ್ದವು.

ಇಷ್ಟಾದ ನಂತರ ಸಂಜೆ ಅಂಗಡಿ ಪೂಜೆಯ ತಯಾರಿ ಶುರು ಆಗುತ್ತಿತ್ತು.
ಇದರ ಸಡಗರ ಸುಮಾರು ಒಂದು ವಾರದ ಹಿಂದಿನಿಂದಲೇ ಶುರು ಆಗುತ್ತಿತ್ತು. ಅಂಗಡಿಗೆ ಬರುವ ಎಲ್ಲರೂಗೂ ಸ್ವೀಟ್ಸ್ ಪ್ಯಾಕ್ ಮಾಡುವ ಕೆಲ್ಸ, ಅಂಗಡಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ, ಸೀರಿಯಲ್ ಸೆಟ್, ಕಲರ್ ಪೇಪರ್, ಶೈನಿಂಗ್ ಪೇಪರ್ ಎಂದು ಅಂಗಡಿ ಪೂರ ಜಗ ಮಗ ಮಾಡುತ್ತಿದ್ದರು ಅಪ್ಪ. ಮಾವಿನ ತಳಿರು ತೋರಣ, ಬಾಳೆ ಕಂಬ ಕಟ್ಟಿ ನಮ್ಮ ಅನ್ಗಡಿ ಮದುವಣಗಿತ್ತಿಯ ಹಾಗೆ ಕನ್ಗೊಳಿಸುತ್ತಿದ್ದಳು.
ಊಟ ಆದ ಕೂಡಲೇ ಎಲ್ಲರೂ ಅಂಗಡಿಗೆ ಒಡುತ್ತಿದ್ದೆವು. ರಂಗೋಲಿ ಬಿಡಿಸಿ, ಅಂಗಡಿಯ ಸುತ್ತ ಹಣತೆಯನ್ನಿಡುತ್ತಿದ್ದೆವು. ಲಕ್ಷ್ಮಿ ಪೂಜೆ ಮಾಡಿ ಬಂಧು ಮಿತ್ರರಿಗೆಲ್ಲ ಸ್ವೀಟ್ ಹಂಚುತ್ತಿದ್ದೆವು.

ಇಷ್ಟೆಲ್ಲಾ ಆದ ಮೇಲೆ ಮನೆಗೆ ಬಂದು ಎಲ್ಲರು ಸೇರಿಕೊಂಡು ಪಟಾಕಿ ಹೊಡೆಯುತ್ತಿದ್ದೆವು. ನನಗೆ ಇವತ್ತಿಗೂ ನಗು ತರುವ ವಿಷಯವೆಂದರೆ ನಕ್ಷತ್ರ ಕಡ್ಡಿಯ ಕಿಡಿಗೆ ಹೆದರಿ ಬಾಳೆಯ ಎಲೆಯ ಕೋಲಿಗೆ ಚುಚ್ಚಿಕೊಂಡು ಹೊಡೆಯುತ್ತಿದ್ದೆ.

ಹಬ್ಬದ ಕೊನೆಯ ದಿನ ತೋಟಕ್ಕೆಲ್ಲ ದೀಪ ಇಡುವ ಕಾರ್ಯಕ್ರಮ. ನಮಗೆ ಅತ್ಯಂತ ಖುಷಿ ಕೊಡುತ್ತಿದ್ದ ದಿನ ಭದ್ರಾ ನದಿ ಬುಡದಲ್ಲಿ ಹಿಟ್ಟಿನ ದೀಪ ಮಾಡಿಡುವ ದಿನ. ಉರಿಯುತ್ತಿದ್ದ ಮಿನುಗು ದೀಪಗಳ ಪ್ರತಿಬಿಂಬವನ್ನು ನೀರಿನಲ್ಲಿ ನೋಡಿ ದೀಪಾವಳಿ ಹಬ್ಬಕ್ಕೆ ವಿದಾಯ ಹೇಳುತ್ತಿದ್ದೆವು.

1969371_987383464624388_6809826510260353227_nಕುದುರೆಮುಖದ ಭದ್ರಾ ನದಿಯ ತೀರದಲ್ಲಿ ತೆಗೆದ ದೃಶ್ಯ