ಸೂರ್ಯಾಸ್ತದ ನಂತರ ಕತ್ತಲೆ ಕವಿದಂತೆ ಜೀರುಂಡೆಗಳ ಆರ್ಭಟ ಕಾಡಿನಲ್ಲಿ ಪ್ರತಿಧ್ವನಿಸುತ್ತಿತ್ತು. ಪಶ್ಚಿಮ ಘಟ್ಟದ ದಟ್ಟಾರಣ್ಯದ ಮಧ್ಯದಲ್ಲಿದ್ದ ಒಂಟಿ ಮನೆ ಸೀಮೆ ಎಣ್ಣೆ ದೀಪದಿಂದ ಬೆಳಗುತಿತ್ತು.

ಮನೆಯ ಒಂದು ಮೂಲೆಯಲ್ಲಿ ಒರಳುಗಲ್ಲು ಕುಕ್ಕುರು ಬಡಿದಿತ್ತು.  ನಾನು ಚಿಮಣಿ ದೀಪ ಹಿಡಿದುಕೊಂಡು ಹೋಗಿ ನೀರು ಹಾಕಿ ತೊಳೆದು ಬಡಿದೆಬ್ಬಿಸಿದೆ. ಗಕ್ಕನೆ ಎಚ್ಚೆತ್ತುಕೊಂಡು ನನ್ನ ಉತ್ಸಾಹದ ಮುಖ ನೋಡಿ ಇವಳು ಯಾಕೆ ಇಷ್ಟು ಖುಷಿಯಾಗಿದ್ದಾಳೆಂದುಕೊಂಡು ಕಕ್ಕಾಬಿಕ್ಕಿಯಾಗಿ ನೋಡಿತು. ನಾನು ಅದರ ಮುಂದೆ ನೆನೆಸಿದ ಅಕ್ಕಿ ಮತ್ತು ಉದ್ದಿನ ಕಾಳನ್ನು ಇಟ್ಟಾಗ ಅದು ಕೂಡ ತಕತಕ ಎಂದು ಕುಣಿಯಿತು. ಒರಳಿಗೆ ಬಿದ್ದ ನೆನಸಿದ ಅಕ್ಕಿ ಮತ್ತು ಉದ್ದಿನ ಕಾಳನ್ನು ನೋಡಿ ಅಂದಾಜಾಗಿರಬೇಕು, ಅದೂ ಕೂಡ ರುಬ್ಬಿತು.

ನಾಲ್ಕಾರು ಬಾರಿ ಹಾಕಿಸಿಕೊಂಡು ಅಷ್ಟೂ ಹಿಟ್ಟನ್ನು ರುಬ್ಬಿ ಕೊಟ್ಟಿತು. ಇಷ್ಟಾದರೆ ಸಾಕೆ? ಅರೆದ ಹಿಟ್ಟು ಹುಳಿ ಬರಬೇಕು. ಆ ಕೊರೆಯುವ ಚಳಿಯಲ್ಲಿ ಎಷ್ಟು ಹೊತ್ತು ಇಟ್ಟರೂ ಹುಳಿ ಬರಸಿಲಿಕ್ಕೆ ಹರಸಾಹಸ ಮಾಡಬೇಕು. ಅದ್ಕಕಾಗಿ ನಮ್ಮೆಲ್ಲರಂತೆ ಅದಕ್ಕೂ ಒಲೆಯ ಮುಂದೆ ಕೂತು ಚಳಿ ಕಾಯಿಸುವ ಚಾನ್ಸ್ ಸಿಕ್ಕಿತು.

ಆ ಖುಷಿಗೆ ಬೆಳಗಾಗೆದ್ದಾಗ ಪಾತ್ರೆಯ ಮೇಲೊರೆಗೂ ಉಕ್ಕಿ ಕಾಯುತ್ತಿತ್ತು. ಅಮ್ಮ ಬೆಳಗೆದ್ದು ಒಣ ಕಟ್ಟಿಗೆಯನ್ನು ತಂದು ಸೌದೆ ಒಲೆಯನ್ನು ಹಚ್ಚುತ್ತಿದ್ದರು. ಫಿಲ್ಟರ್ ಕಾಫಿ಼ ಕುಡಿದ ನಂತರ ಕಬ್ಬಿಣದ ಕಪ್ಪು ಕಾವಲಿಯನ್ನು ಒಲೆಯ ಮೇಲೆ ಕಾಯಲಿಡುತ್ತಿದ್ದರು. ಅಷ್ಟರಲ್ಲಿ ನನಗೆ ಕಾಯಿ ತುರಿದು ಕೊಟ್ಟು, ಒಣ ಮೆಣಸಿನ ಹಾಗು ಹಸಿ ಮೆಣಸಿನ ಕಾಯಿಯ ಕೆಂಪು ಮತ್ತು ಬಿಳಿ ಚಟ್ನಿಯನ್ನು ರುಬ್ಬಲು ಹೇಳುತ್ತಿದ್ದರು.  ಈ ಚಳಿಗಾಲದಲ್ಲಿ ಒರಳಿನಲ್ಲಿ ಚಟ್ನಿಯನ್ನು ರುಬ್ಬವ ಕೆಲಸ ಯಾರಿಗೂ ಬೇಡ. ಚಳಿ ಹಿಡಿದು ಕೂತಿದ್ದ ನಮ್ಮ ಕಲ್ಲು, ಚಟ್ನಿಯನ್ನು ಬೆಣ್ಣೆಯಂತೆ ಮಾಡುತಿತ್ತು. ಸ್ವಲ್ಪ ಬಿಸಿ ನೀರು ಕೊಟ್ಟಾಗ ಸರಿಯಾಗಿ ರುಬ್ಬುತಿತ್ತು.

ಕಾದ ಕಾವಲಿಗೆ ರುಬ್ಬಿದ ಹಿಟ್ಟನ್ನು ಅಮ್ಮ ಹಾಕಿ ತಿರುವುತ್ತಿದ್ದಳು. ಅದು ಸುಮಾರಾಗಿ ಬೆಂದ ಮೇಲೆ ಈರುಳ್ಳಿ ಮತ್ತು ಒಣ ಮೆಣಸಿನ ಕಾಯಿಯ ಕೆಂಪು ಚಟ್ನಿಯನ್ನು ಹರಡುತ್ತಿದ್ದಳು. ಮಧ್ಯದಲ್ಲಿ ಆಲೂಗೆಡ್ಡೆಯ ಪಲ್ಯ. ದೋಸೆಯ ಘಮ ತಾಳದೆ ನಮ್ಮ Rambo ತನ್ನೆರಡೂ ಕಾಲನ್ನೂ ಅಡುಗೆ ಮನೆಯಲ್ಲಿಟ್ಟುಕೊಂಡು ಕಾಯುತ್ತಿದ್ದ.

ಅಮ್ಮನ ಜೊತೆ ಹರಟೆ ಹೊಡೆಯುತ್ತ, ಕೆಂಪಗೆ ರೋಸ್ಟ್ ಆದ ಮಸಾಲೆ ದೋಸೆಯನ್ನು ಕಾಯಿ ಚಟ್ನಿಯ ಜೊತೆ ತಿನ್ನುತ್ತಿರುವಾಗ ರೇಡಿಯೋದಲ್ಲಿ ಕಿಶೋರನು “ಯೇ ಜೀವನ್ ಹೇ, ಇಸ್ ಜೀವನ್ ಕಾ, ಯೆಹೀ ಹೇ ರಂಗ್ ರೂಪ್” ಎಂದು ಹಾಡುತ್ತಿದ್ದ…