
ಬೇಸಿಗೆಯ ಸಂಜೆ. ಕುದುರೆಮುಖದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗೆ ನಾವು ಕಾದಿರುತ್ತಿದ್ದೆವು. ಅಲ್ಲಿ ಕಿವಿಯೋಲೆ, ಕ್ಲಿಪ್ಸ್, ಬಣ್ಣದ ಬಳೆಗಳು ಇವುಗಳ ಮೇಲಷ್ಟೇ ನಮ್ಮ ಕಣ್ಣು ಹಾಯುತ್ತಿದ್ದವು. ಇದಲ್ಲದೆ ವಾರಕ್ಕೊಮ್ಮೆ ಬರುವ ಕಾಕನ ಹತ್ತಿರ ಮಾತುಕತೆ, ಅಮ್ಮನ ತರಕಾರಿ ಎಲ್ಲ ತಗೊಂಡ ಮೇಲೆ ಒಂದು ಗ್ಲಾಸ್ ಕಬ್ಬಿನಹಾಲು ಕುಡಿದಾಗ ನಮ್ಮ ಸಂತೆಯ ಬೇಟೆ ಮುಗಿಯುತ್ತಿತ್ತು.
ಸಂತೆಯಲ್ಲಿ ಅಡ್ಡಾಡಿ ವಾರದ ವ್ಯಾಪಾರ ಮುಗಿಸಿ ಬಸ್ಸು ಹತ್ತುವಾಗ ಬೇಸಿಗೆಯ ಕಡು ಬಿಸಿಲಿಗೆ ಬೆಂದ ಟೊಮೇಟೊಗಳಂತೆ ಆಗಿರುತ್ತಿದ್ದೆವು. ನಮ್ಮೂರಿಗೆ ರೆಡಿಯಾದ ಗೋಪಾಲ ಕೃಷ್ಣ ಬಸ್ಸು ಹತ್ತುತ್ತಿದ್ದೆವು. ಬಸ್ಸಲ್ಲಿ ಬರೋಬ್ಬರಿ ಮಾತು ಕಥೆ ನಡೆಯುತ್ತಿದ್ದವು. ತರಕಾರಿ ಬೆಲೆ ಜಾಸ್ತಿ, ನ್ಯಾಷನಲ್ park ಬಿಡುಗಡೆ, ಕಬ್ಬಿಣದ ಅದಿರು ಮೈನಿಂಗ್ ಮುಗಿಯುತ್ತದೆ ಅನ್ನೋ ಆತಂಕದ ಅಂತೆ ಕಂತೆ ಮಾತುಗಳು ಕೇಳಿ ಬರುತ್ತಿದ್ದವು. ನಮಗೆ ಇದಾವುದರ ಪರಿವೆ ಇಲ್ಲದೆ ಯಾವಾಗ ಬಣ್ಣದ ಕ್ಲಿಪ್ಸ್ ಹಾಕಿಕೊಂಡು ಕನ್ನಡಿ ಮುಂದೆ ನಿಲ್ಲುತ್ತೇವೋ ಅನ್ನೋ ಸಂಭ್ರಮ.
ಬಸ್ಸಿನಿಂದಿಳಿದು ನಾಲ್ಕಾರು ಕೈ ಚೀಲಗಳನ್ನು ಎಳೆದುಕೊಂಡು ಮನೆ ಸೇರುವಾಗ ಸುಸ್ತೋ ಸುಸ್ತು.
ಸುಸ್ತು ನೀವಾರಿಸಿಕೊಳ್ಳಲು ನಾವು ಸೀದಾ ಹೋಗುತ್ತಿದ್ದ ಜಾಗ ಹಿತ್ತಲಿನ ನೀರಿನ ಝರಿಯ ಬಳಿ. ನಮ್ಮ ಹಿತ್ತಲಿನ ತೊರೆ ನಮ್ಮ ಕಾಡಿನಲ್ಲೇ ಉಗಮಿಸುತ್ತಿತ್ತು. ನನ್ನ ಅಜ್ಜ ಅಜ್ಜಿ ಅದಕ್ಕೆ ದಾರಿ ಮಾಡಿ ಹಿತ್ತಲಿನವರೆಗೆ ಕಾಲುವೆ ಮಾಡಿದ್ದರು.
ಕಾಡಿನಿಂದ ಬರುತ್ತಿದ್ದ ತೊರೆ ಸದಾ ಜಲ್ಲೆಂದು ಹರಿಯುತ್ತಿತ್ತು. ಮಲೆನಾಡಿನ ಪುಣ್ಯವಂತರು ನಾವು. ಆ ತೊರೆಯನ್ನು ನಾವು ವಾರಕ್ಕೊಮ್ಮೆಯಂತೆ ಬಿದ್ದಿರುವ ಎಲೆಯನ್ನು ಹೆಕ್ಕುತ್ತಿದ್ದೆವು. ಕಟ್ಟಿರುವ ಕಸವನ್ನು ತೆಗೆದು ಒಗೆಯುತ್ತಿದ್ದೆವು. ಬದಿಯಲ್ಲಿ ಬ್ಲೀಚಿಂಗ್ ಪುಡಿ ಉದಿರಿಸುತ್ತಿದ್ದೆವು ಅಷ್ಟೇ. ಯಾವ ಮುಚ್ಚಿಗೆಯೂ ಇಲ್ಲ, ಯಾವ ಫಿಲ್ಟರ್ ಕೂಡ ಇಲ್ಲ.
ಬರುವ ನೀರನ್ನು ಹಾಗೆ ಬಾಯಿ ಕೊಟ್ಟು ಕುಡಿಯುತ್ತಿದ್ದೆವು. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ವರೆಲ್ಲ ಈ ತೊರೆಯ ಆಶ್ರಿತರಾಗಿದ್ದೆವು. ಅಷ್ಟು ಶುದ್ಧ ನೋಡಿ ನಮ್ಮ ಕಾಡು ಹಾಗು ಅದರ ನೀರು.
ಈಗ ಎಲ್ಲ ಪರಿಶೀಲನೆ ಮಾಡಿ ನೀರು ಕುಡಿದರೂ ಹತ್ತಾರು ಕಾಯಿಲೆ ಬಂದು ಒಕ್ಕರಿಸುತ್ತವೆ.
ಆ ತೊರೆ ಸುಮಾರು ಕಾಲು ಕಿಲೋಮೀಟರು ದೂರ ಇತ್ತು. ತೊರೆಯ ಮೂಲ ಹಿಡಿದು ಕಾಡಿನ ಹೃದಯಕ್ಕೆ ಹೋಗುವುದೆಂದರೆ ನಮಗೇನೋ ಹೆಮ್ಮೆಯ ವಿಷಯ.
ನಾನು ಹಾಗು ತಂಗಿ ಸ್ಕೂಲ್ ಮುಗಿಸಿ ಎಷ್ಟೋ ಬಾರಿ ತೊರೆಯ ಇನ್ಸ್ಪೆಅಕ್ಷನ್ ಕೆಲಸ ಮಾಡುತ್ತಿದ್ದೆವು. ಒಂದೇ ಒಂದು ಕಾಡಿನ ಎಲೆ, ಕಡ್ಡಿ ಇರದ ಹಾಗೆ ನೋಡಿಕೊಳ್ಳುತ್ತಿದ್ದೆವು.
ತೊರೆಯ ನೀರು ಕುಡಿದು ಬೆಳೆದು ಬಂದವರು ನಾವು. ಎಲ್ಲೊ ಹೊಯ್ತು ನನ್ನ ಮಾತು. ಸಂತೆಯ ಸುಸ್ತು ನಮ್ಮ ತೊರೆಯ ಅಮೃತ ಬಿಂದು ಹೊಟ್ಟೆ ಸೇರುತ್ತಿದ್ದಂತೆ ಮಾಯವಾಗಿ ಹೋಗುತ್ತಿತ್ತು. ಕೈ ಕಾಲು ಮುಖಕ್ಕೆ ನೀರು ಚಿಮ್ಮಿಸಿದಾಗೆ ಹಾಯೆನಿಸುತ್ತಿತ್ತು.
ಸಂತೆ ಇಂದ ಕೊಂಡ ಓಲೆ ಬಳೆಗಳನ್ನು ತೊಟ್ಟು ಅಜ್ಜಿ ಅತ್ತೆಯರಿಗೆಲ್ಲ ತೋರಿಸಿ ಸಂಭ್ರಮದಿಂದ ಜಿಗಿಯುತ್ತಿದ್ದೆವು. ನಮ್ಮ ಆಟ ಮುಂದುವರೆಯುತ್ತಿತ್ತು.