ನನ್ನ ಬಳಿ ಇರುವ ಅತ್ಯಂತ ಮುಖ್ಯವಾದ ಆಸ್ತಿ ಎಂದರೆ ನಾವು ಕುದುರೆಮುಖದ ಪ್ರಕೃತಿಯಲ್ಲಿ ಕಳೆದ ನಮ್ಮ ಬಾಲ್ಯದ ಸ್ವಚ್ಛಂದದ ದಿನಗಳ ನೆನಪುಗಳು. ನಾವು ನಮ್ಮ ಹಳ್ಳಿ ಮನೆಯನ್ನು ಬಿಟ್ಟು ೧೫ ವರ್ಷ ಜಾಸ್ತಿ ಕಳೆದರೂ, ನನಗೆ ಆಗಾಗ ನಮ್ಮ ಬಾಲ್ಯದ ನೆನಪುಗಳು ಕಣ್ಣು ಮುಂದೆ ಹಾಯ್ದು ಖುಷಿಯನ್ನು ತಂದು ಕೊಡುತ್ತವೆ.

ಹೀಗೆ ಒಂದು ದಿನ ಕೂತಿದ್ದಾಗ ನಮ್ಮ ಮನೆಯ ದನಗಳು ನನಗೆ ನೆನಪಿಗೆ ಬಂದವು. ಅವು ಸಾಕು ಪ್ರಾಣಿಗಳು ಅನ್ನುವುದಕ್ಕಿಂತ ನಮ್ಮ ಮನೆಯವರಿಗಿಂತ ಹೆಚ್ಚು ನಮಗೆ ಹತ್ತಿರವಾಗಿದ್ದವು. ನಮ್ಮ ಮನೆಯಲ್ಲಿ ಒಂದು ಸಮಯದಲ್ಲಿ ಸುಮಾರು ೧೫ ಹಸುಗಳು ಹಾಗೂ ಆರೇಳು ಕರುಗಳಿದ್ದವು. ದನ ಹಾಗೂ ಎತ್ತುಗಳಿಗೊಂದು ಕೊಟ್ಟಿಗೆ ಇದ್ದರೆ ಕರುಗಳಿಗೆ ಇನ್ನೊಂದು ಕೊಟ್ಟಿಗೆ ಇತ್ತು. ಈ ಕೊಟ್ಟಿಗೆಯಲ್ಲಿ ಸಾಲಾಗಿ ಚಪ್ಪಡಿ ಕಲ್ಲನ್ನು ಹಾಸಿದ್ದರು. ಹಾಗೂ ಕೊಟ್ಟಿಗೆಯ ಅಟ್ಟದಲ್ಲಿ ಒಣ ಹುಲ್ಲನ್ನು ಕೂಡಿಡುತ್ತಿದ್ದೆವು. ಇನ್ನು ಕೊಟ್ಟಿಗೆಯ ಗೋಡೆಯೆಂದರೆ ಅಲ್ಲಿ ಮರದ ದೊಡ್ಡ ದಿಮ್ಮಿಗಳನ್ನು ಹೂತು ಅವುಗಳಿಗೆ ಅಡ್ಡಲಾಗಿ ಚಿಕ್ಕ ಚಿಕ್ಕ ಕಟ್ಟಿಗೆಗಳನ್ನಿಟ್ಟು ಹಗ್ಗದಿಂದ ಕಟ್ಟಿದ್ದರು. ಅಲ್ಲಲ್ಲಿ ಕಟ್ಟಿಗೆಯ ಮಧ್ಯದಲ್ಲಿ ಕಿಂಡಿಗಳಿದ್ದು ಅಲ್ಲಿಂದ ನಮ್ಮ ಅಡಿಕೆ ತೋಟ ಹಾಗೂ ಹಿತ್ತಲಿನ ಕಾಡು ಕಾಣುತ್ತಿತ್ತು. ಕೊಟ್ಟಿಗೆಯ ಪಕ್ಕದಲ್ಲೇ ದೊಡ್ಡದಾದ ಗೊಬ್ಬರ ಗುಡಿ ಇತ್ತು. ಕೊಟ್ಟಿಕ್ಕಿಯಲ್ಲಿದ್ದ ಮರದ ದಿಮ್ಮಿಗಳಲ್ಲಿ ದಪ್ಪವಾದ ಸಿಂಬೆ ಹಗ್ಗವನ್ನು ಕಟ್ಟಿದ್ದರು. ಪ್ರತಿಯೊಂದು ದಿಮ್ಮಿಗೆ ಒಂದೊಂದು ದನವನ್ನು ಕಟ್ಟುತ್ತಿದ್ದೆವು. ಇದೇ ರೀತಿಯಲ್ಲಿ ಸ್ವಲ್ಪ ಚಿಕ್ಕದಾಗಿ ಕರುಗಳ ಕೊಟ್ಟಿಗೆ ಇತ್ತು.

ಸಂಜೆ ದನಗಳನ್ನೆಲ್ಲ ಕೂಡಿ ಬಾಗಿಲು ಹಾಕಿ ಬಂದರೆ, ಮರುದಿನ ಬೆಳಿಗ್ಗೆಯೇ ದನದ ಕೊಟ್ಟಿಗೆಯ ಬಾಗಿಲನ್ನು ತೆಗೆಯುತ್ತಿದ್ದುದು. ಬಾಗಿಲು ತೆಗೆದ ತಕ್ಷಣ, ದನಗಳೆಲ್ಲ ಬಾಗಿಲ ಕಡೆ ನೋಡುತ್ತಾ ಎದ್ದು ಮೈ ಕೊಡವಿ ಕೊಳ್ಳುತ್ತಿದ್ದವು. ಅಪ್ಪ ಅಮ್ಮ ಅವುಗಳಿಗೆಲ್ಲ ಅಕಚ್ಚಿ ಅಥವಾ ಕಲಗಚ್ಚನ್ನು ಬಿಸಿ ಮಾಡಿ ಕೊಡುತ್ತಿದ್ದರು. ಕಲಗಚ್ಚು ಎಂದರೆ ಅಕ್ಕಿ ತೊಳೆದ ನೀರು ಹಾಗೂ ಅನ್ನ ಮಾಡಿ ಬಸಿದಂತ ತಿಳಿ. ಇದಲ್ಲದೆ ಅವುಗಳಿಗೆ ನೆನೆಸಿದ ಹಿಂಡಿ ಮತ್ತು ಬೇಯಿಸಿದ ಬಿಸಿ ಗಂಜಿಯನ್ನು ಕೊಡುತ್ತಿದ್ದರು. ಗಂಜಿ ಪಾತ್ರೆಗಳನ್ನು ಬಾಗಿಲಲ್ಲಿ ನೋಡಿಯೇ ನಾ ಮುಂದು ತಾ ಮುಂದು ಎಂದು ಹಗ್ಗದಿಂದ ಉಣುಚಿಕೊಳ್ಳಲು ಪ್ರಯತ್ನ ಪಡುತ್ತಿದ್ದವು. ಇಷ್ಟಾದ ಮೇಲೆ ಅವುಗಳ ಕಾಲ ಬುಡದಲ್ಲಿ ಬಿದ್ದ ಸಗಣಿಯನೆಲ್ಲ ಎತ್ತಿ ಗೊಬ್ಬರ ಗುಂಡಿಗೆ ಎಸೆಯುತ್ತಿದ್ದರು.
ಇನ್ನು ಹಾಲು ಕರೆಯುವ ಕಾರ್ಯಕ್ರಮ. ಮೊದಲಿಗೆ ಮಲಗಿದ್ದ ಕರುಗಳನ್ನು ಎಬ್ಬಿಸಿ ಅವುಗಳ ಅಮ್ಮಂದಿರ ಹತ್ತಿರ ಬಿಡುವುದು. ಅವು ಖುಷಿಯಲ್ಲಿ ಬಾಲವನ್ನು ಎತ್ತಿಕೊಂಡು ಹಾಲನ್ನು ಕುಡಿಯುತ್ತಿದ್ದವು. ಅಮ್ಮಂದಿರು ಕೂಡ ಕರುವಿನ ಮೈಯನ್ನು ನೆಕ್ಕುತ್ತ ಆಸೆ ತೋರಿಸುತ್ತಿದ್ದವು. ಸ್ವಲ್ಪ ಹೊತ್ತಾದ ಮೇಲೆ ಕರುಗಳನ್ನು ಕಷ್ಟ ಪಟ್ಟು ಎಳೆದು ತಾಯಿಯ ಮುಖದ ಹತ್ತಿರ ಕಟ್ಟುತ್ತಿದ್ದರು ಹಾಗೂ ಹಾಲು ಕರೆಯಲು ಕೌಳಿಗೆ ಹಿಡಿದು ಸಿದ್ಧವಾಗುತ್ತಿದ್ದರು. ಮೊದಲಿಗೆ ಕೆಚ್ಚಲಿಗೆ ನೀರನ್ನು ಚಿಮುಕಿಸಿ, ಹರಳೆಣ್ಣೆಯನ್ನು ಸ್ವಲ್ಪ ಸವರಿ, ದರ್ ಭರ್ರ್ ಎಂದು ಹಾಲನ್ನು ಕರೆಯುತಿದ್ದರು. ೩ ಕೆಚ್ಚಲಿನಿಂದ ಸುಮಾರು ಹಾಲು ಕರೆದ ಮೇಲೆ ಕರುವನ್ನು ಮತ್ತೆ ಬಿಡುತ್ತಿದ್ದರು. ಅಲ್ಲಿಗೆ ಆ ದನದ ಹಾಲು ಕರೆಯುವ ಕೆಲಸ ಮುಗಿಯಿತು. ನಮ್ಮಲ್ಲಿ ಹೆಚ್ಚಾಗಿ ೨ ರಿಂದ ಮೂರು ದನಗಳು ಹಾಲು ಕೊಡುತ್ತಿದ್ದವು. ಒಮ್ಮೆಯಂತೂ ೬ ದನಗಳು ಒಂದರ ಹಿಂದೆ ಇನ್ನೊಂದು ಅಂತ ಕರು ಹಾಕಿದ್ದವು.

ಇವೆಲ್ಲ ನಮ್ಮ ಬಾಲ್ಯದ ಮಾತಾದರೆ ನಾವು ಹುಟ್ಟುವ ಮೊದಲು ನಮ್ಮ ಅಜ್ಜಿಯ ಕಾಲದಲ್ಲಿ ಸುಮಾರು ಎಮ್ಮೆಗಳು, ದನ ಕರುಗಳಿದ್ದು ಅವುಗಳ ಹಾಲು ಮಾರಿಯೇ ಜೀವನ ಮಾಡುತ್ತಿದ್ದರು. ಒಮ್ಮೆಲೇ ಮಿಂಚಿನ ಕಾಯಿಲೆಯೆಂದು ಬಂದು ಇದ್ದಕಿದ್ದಂತೆ ಒಂದೊಂದೇ ಎಮ್ಮೆ, ದನಗಳು ಸತ್ತು ಒಂದೇ ಒಂದು ಕರು ಉಳಿದಿತ್ತಂತೆ. ಅವಳ ಹೆಸರು ಪುಟ್ಟಿ ಅಂತ. ಅವಳನ್ನು ಅಜ್ಜಿ ಭಯ ಮತ್ತು ಪ್ರೀತಿಯಿಂದ ಮನೆಯೊಳಗೇ ಕಟ್ಟಿ ಹಾಸಿಗೆಯ ಪಕ್ಕದಲ್ಲೇ ಮಲಗಿಸಿಕೊಳ್ಳುತ್ತಿದ್ದರಂತೆ. ಹೊರಗಿನಿಂದ ತಂದ ಹಾಲನ್ನು ಚಮಚದಲ್ಲಿ ಕುಡಿಸಿ ಅವಳನ್ನು ಹೇಗೋ ಉಳಿಸಿಕೊಂಡರು. ಪುಟ್ಟಿ ಬಾಗಿದ ಕೊಂಬನ್ನು ಹೊಂದಿದ ಕಂದು ಹಾಗೂ ಕಪ್ಪು ಮಿಶ್ರಿತ ಬಣ್ಣದ ದನವಾಗಿತ್ತು. ಪುಟ್ಟಿಗೆ ಜೊತೆಯಾಗಿ ಶ್ರೀದೇವಿ ಎಂಬ ಹೆಸರಿನ ಇನ್ನೊಂದು ದನವನ್ನು ತಂದು ಸಾಕಿದರು. ಪುಟ್ಟಿಯನ್ನು ಕಾಪಾಡಿ ಪ್ರೀತಿಯಿಂದ ಬೆಳೆಸಿದ್ದಕ್ಕೋ ಏನೋ ಸ್ವಲ್ಪ ಹಠ ಸ್ವಭಾವದ ದನವಾದರೆ, ಶ್ರೀದೇವಿ ಅಷ್ಟೇ ಸಾದು ದನವಾಗಿತ್ತು. ನಾವು ನಮ್ಮ ಎಳೆವೆಯಲ್ಲಿ ನೋಡಿದ ದನ ಕರುಗಳೆಲ್ಲ ಇವರಿಬ್ಬರ ಸಂತಾನವೇ.

ಇನ್ನು ನಮಗೆ ಮುದ ನೀಡುವ ನೆನಪು ಎಂದರೆ ನಮ್ಮ ದನಗಳು ಕರು ಹಾಕುವ ಸಮಯ ಬಂದಾಗ. ದನಗಳು ಗಬ್ಬ ಆಗಿದಾವೆ ಎಂದು ಹಿರಿಯರು ಹೇಳಿದ್ದು ಕೇಳಿದಾಗಲೇ ನಾವು ಕರು ಯಾವಾಗ ಹುಟ್ಟುತ್ತದೆಂದು ಕಾಯುತ್ತಿದ್ದೆವು. ಅವುಗಳ ಹೆರಿಗೆಯ ಸಮಯ ಬಂದಾಗ ಮನೆಯಲ್ಲೇ ಕಟ್ಟಿ ಹುಲ್ಲನ್ನು ಹಾಕುತ್ತಿದ್ದರು ಮತ್ತು ನೋವು ಬರುವುದನ್ನು ಮನೆಯಲ್ಲೇ ಇದ್ದು ಕಾಯುತ್ತಿದ್ದರು. ಅವುಗಳಿಗೆ ನೋವು ಬಂದಾಗ ನಮಗೆ ಸಂಕಟ ಒಂದೆಡೆಯಾದರೆ, ಪುಟಾಣಿ ಕರುವನ್ನು ನೋಡುವ ಕಾತುರ ಇನ್ನೊಂದೆಡೆ. ಒಂದೆರಡು ಗಂಟೆಯ ನೋವಿನ ನಂತರ ಪುಟಾಣಿ ಕರು ಹೊರ ಬರುತ್ತಿತ್ತು. ಅದನ್ನು ತಕ್ಷಣ ಶುಚಿ ಮಾಡಿ ಅದರ ಕಾಲಿನ ಎಳೆಯ ಗೊರಸನ್ನು ತೆಗೆಯುತ್ತಿದ್ದರು. ನಂತರ ದನಕ್ಕೆ ಕಾರದ ದೊಡ್ಡ ಮುದ್ದೆಯನ್ನು ಕಲ್ಲಿನಲ್ಲಿ ಕುಟ್ಟಿ ಹುಲ್ಲಿನಲ್ಲಿ ಸೇರಿಸಿ ತಂಡಿ ಸೋಕಬಾರದೆಂದು ಬಾಯಿಗೆ ಕೊಡುತ್ತಿದ್ದರು.
ಕರುವಿಗೆ ಹಾಲು ತಿನ್ನಿಸಿದ ಮೇಲೆ, ಉಳಿದ ಗಟ್ಟಿ ಹಾಲನ್ನು ಕರೆದು ಗಿಣ್ಣವನ್ನು ಮಾಡುತ್ತಿದ್ದರು. ಇನ್ನು ಕತ್ತಲಾಗುತ್ತಿದ್ದಂತೆ ಕರುವನ್ನು ಮಗುವಿನ ಹಾಗೆ ಹೊತ್ತುಕೊಂಡು ಮನೆಯ ಒಳಗೆ ತಂದು, ಚಾವಡಿಯ ಮೇಜಿನ ಕಾಲಿಗೆ ಕಟ್ಟುತ್ತಿದ್ದರು. ಬಾಲೆ ಕರುವಿಗೆ ಮಲಗಲು ಕಂದು ಗೋಣಿಯ ಒಳಗೆ ಬೈಹುಲ್ಲನ್ನು ತುಂಬಿಸಿ ದಪ್ಪ ಬೆಚ್ಚನೆಯ ಹಾಸಿಗೆ ಮಾಡುತ್ತಿದ್ದರು. ಇಲ್ಲಿಂದ ಹದಿನೈದು ದಿನ ನಮ್ಮ ಬಿಡಾರ ಮೇಜಿನ ಬುಡದಲ್ಲೇ. ಕರುವಿನ ಪಕ್ಕವೇ ಕೂತು ಅದನ್ನು ಸವರುವುದು, ನೋಡುವುದು, ಅಲ್ಲೇ ಪಾಠ, ಊಟ ಎಲ್ಲ ನಡೆಯುತ್ತಿತ್ತು. ಹದಿನೈದು ದಿನ ಮುಗಿಯುತ್ತಿದ್ದಂತೆ ನಮಗೆ ಬೇಜಾರು. ಕರುವನ್ನು ಇನ್ನು ಅದರ ಕೊಟ್ಟಿಗೆಯಲ್ಲಿ ಸೇರಿಸುತ್ತಾರೆಂದು!

ನಮ್ಮನೆ ದನ ಕರುಗಳು ಕೇವಲ ಸಾಕು ಪ್ರಾಣಿಗಳಲ್ಲದೆ, ನಮ್ಮ ಮನೆಯವರಂತೆ ಇದ್ದವು. ಎಷ್ಟೇ ವರ್ಷ ಕಳೆದರೂ, ಅವುಗಳ ನೆನಪು ಇನ್ನೂ ಹಸಿಯಾಗಿಯೇ ಇದೆ. ಅವುಗಳನ್ನು ನೆನೆದಾಗ ಹುಲ್ಲಿನ ಘಮ, ಅವುಗಳ ಮುಗ್ಧ ಮುಖಗಳು ಹಾಗೆ ಮನಃಪಟಳದಲ್ಲಿ ಹಾಯ್ದು ಹೋಗುತ್ತವೆ.